Updated By: Priyalachhi
ಬೆಂಗಳೂರು: ರಾಜ್ಯದ 52 ಸಾವಿರ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯಡಿ ಹಣ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಮೊದಲ ಹಂತದಲ್ಲಿ 20 ಸಾವಿರ ಫಲಾನುಭವಿಗಳ ಸಮಸ್ಯೆ ಇತ್ಯರ್ಥಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ಇರುವವರ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಇಂದು ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಬಿಜೆಪಿ ಸದಸ್ಯ ಪಿ.ಹೆಚ್.ಪೂಜಾರ್ ಅವರ ಪ್ರಶ್ನೆಗೆ ಸಚಿವೆ ಉತ್ತರಿಸಿದರು.
ರಾಜ್ಯದಲ್ಲಿ ಸುಮಾರು 1.26 ಕೋಟಿ ಫಲಾನುಭವಿಗಳಿಗೆ ಗೃಹ ಲಕ್ಷ್ಮೀ ಹಣ ನೀಡಲಾಗುತ್ತಿದೆ. ಐಟಿ ಹಾಗೂ ಜಿಎಸ್ಟಿ ದಾಖಲೆಯಂತೆ 52 ಸಾವಿರ ಫಲಾನುಭವಿಗಳಿಗೆ ಯೋಜನೆಯಡಿ ಹಣ ತಲುಪುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈಗಾಗಲೇ 20 ಸಾವಿರ ಫಲಾನುಭವಿಗಳ ಸಮಸ್ಯೆ ಸರಿಪಡಿಸಲಾಗಿದೆ ಎಂದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿ ಮಾತನಾಡಿದ ಪೂಜಾರ್, ಐಟಿ ಹಾಗೂ ಜಿಎಸ್ಟಿ ಪಾವತಿ ಮಾಡುತ್ತಿರುವುದಾಗಿ ಹೇಳಿ ಬಾಗಲಕೋಟೆ ಜಿಲ್ಲೆಯಲ್ಲಿ 712 ಮಂದಿ ಫಲಾನುಭವಿಗಳನ್ನು ಯೋಜನೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ತೆರಿಗೆ ಪಾವತಿ ಮಾಡದಿರುವ ಬಗ್ಗೆ ಅಗತ್ಯ ದಾಖಲಾತಿಗಳನ್ನು ಒದಗಿಸಿದರೂ ಇದುವರೆಗೂ ಗೃಹ ಲಕ್ಷ್ಮೀ ಹಣ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.



