Updated By: Priyalachhi
ಬೆಂಗಳೂರು: ಪ್ರಲ್ಹಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಜಾಹೀರಾತು ನೀಡಿರುವುದು ತಪ್ಪು ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹೇಳಿಕೆ ಪ್ರತಿಕ್ರಿಯಿಸುತ್ತಾ, ಪ್ರಲ್ಹಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸವೇ ಗೊತ್ತಿಲ್ಲ. ಇದು ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ ಆರಂಭವಾದ ಪತ್ರಿಕೆ. ಇದು ದೇಶದ ಇತಿಹಾಸದ ಭಾಗವಾಗಿದೆ. ಜೋಶಿ ಅವರಾಗಲಿ, ಅವರ ಪಕ್ಷವಾಗಲಿ ಯಾವುದೇ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿಲ್ಲ. ಅವರು, ಅವರ ಪಕ್ಷದವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಹೀಗಾಗಿ ಅವರಿಗೆ ಅರಿವಿಲ್ಲ. ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ತಿಳಿಸಿದರು.
ಜಿ ರಾಮ್ ಜಿ ವಿರುದ್ಧ ಕಾನೂನು ಹೋರಾಟ: ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಪಕ್ಷ ನ್ಯಾಯಾಲಯದಲ್ಲಿ ಕಾನೂನು ಹಾಗೂ ಬೀದಿಗಿಳಿದು ಹೋರಾಟ ಮಾಡಿ ಜನರಲ್ಲಿ ಅರಿವು ಮೂಡಿಸಲಾಗುವುದು. ಕೇಂದ್ರ ಸರ್ಕಾರದ ಈ ಹೊಸ ಕಾಯ್ದೆ ಜಾರಿ ಕಷ್ಟ. ಮನರೇಗಾ ಯೋಜನೆಯಲ್ಲಿ ಕಾಮಗಾರಿ ಆಯ್ಕೆ ಮಾಡುವ ಅಧಿಕಾರ ಪಂಚಾಯಿತಿಗಳ ಬಳಿ ಇತ್ತು. ಈಗ ದೆಹಲಿಯಿಂದ ತೀರ್ಮಾನ ಆಗುತ್ತದೆ. ಶೇಕಡಾ 40 ರಷ್ಟು ಅನುದಾನ ಭರಿಸಲು ಯಾವುದೇ ರಾಜ್ಯಗಳಿಂದ ಸಾಧ್ಯವಿಲ್ಲ. ಈ ವಿಚಾರವಾಗಿ ಕೇಂದ್ರ ಸರ್ಕಾರ ತೀರ್ಮಾನ ಮಾಡುವ ಮುನ್ನ ರಾಜ್ಯಗಳ ಅಭಿಪ್ರಾಯ ಪಡೆಯಬೇಕಿತ್ತು. ರಾಜ್ಯಗಳ ಅಭಿಪ್ರಾಯ ಪಡೆಯದೇ ಈ ತೀರ್ಮಾನ ಮಾಡಿದ್ದಾರೆ. ಇದರ ವಿರುದ್ಧ ನಾವು ನಾಯ್ಯಾಲಯದ ಮೆಟ್ಟಿಲೇರುತ್ತೇವೆ. ಜತೆಗೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಪ್ರತಿ ಪಂಚಾಯಿತಿಯಲ್ಲಿ ಸಭೆ ನಡೆಸುತ್ತೇವೆ. ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಜನರಲ್ಲಿ ಅರಿವು ಮೂಡಿಸುತ್ತೇವೆ ಎಂದು ಹೇಳಿದರು.



