ಸುಂಟರಗಾಳಿಗೆ ಬೃಹತ್ ಪೆಂಡಾಲ್ ಕುಸಿತ; ಕ್ಷಣ ಕಾಲ ವಿಚಲಿತರಾದ ಸಚಿವ ಸತೀಶ್ ಜಾರಕಿಹೊಳಿ

0
54

Updated By: Priyalachhi 

ಹಾವೇರಿ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸುಂಟರಗಾಳಿ ಬೀಸಿದ ಪರಿಣಾಮ ಕಾರ್ಯಕ್ರಮಕ್ಕೆಂದು ಹಾಕಲಾಗಿದ್ದ ಬೃಹತ್ ಪೆಂಡಾಲ್ ಕುಸಿದುಬಿದ್ದ ಘಟನೆ ರಾಣೆಬೆನ್ನೂರು ನಗರದಲ್ಲಿಂದು ನಡೆದಿದೆ.

ರಾಣೆಬೆನ್ನೂರು ನಗರದಲ್ಲಿ ಏರ್ಪಡಿಸಲಾಗಿದ್ದ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಸತೀಶ್ ಜಾರಕಿಹೊಳಿ, ಕಾರ್ಯಕ್ರಮ ಮುಗಿಸಿ ಇನ್ನೇನು ತೆರಳಬೇಕಿತ್ತು. ಅಲ್ಲಿ ಸೇರಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಧೂಳು ಮಿಶ್ರಿತ ಭಾರೀ ಸುಂಟರಗಾಳಿ ಬೀಸಿದ್ದು, ಗಾಳಿಗೆ ಕಾರ್ಯಕ್ರಮಕ್ಕೆಂದು ಪೆಂಡಾಲ್ ಏಕಾಏಕಿ ಕುಸಿದು ಬಿದ್ದಿದೆ. ಸಚಿವರ ಬೆನ್ನಹಿಂದೆಯೇ ಈ ಪೆಂಡಾಲ್ ಇತ್ತು. ಪೆಂಡಾಲ್ ಕುಸಿಯುತ್ತಿದ್ದಂತೆಯೇ ಸಚಿವರು ಹಾಗೂ ಅಲ್ಲಿದ್ದವರು ಕ್ಷಣ ಕಾಲ ವಿಚಲಿತರಾದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿಯವರು ಇದೀಗ ಗಾಂಧಿ ವಿರೋಧ ಮಾಡುತ್ತಿದ್ದಾರೆ. ಮುಂದೆ ಬಾಬಾ ಸಾಹೇಬ್ ಅಂಬೇಡ್ಕರ್ ವಿರೋಧ ಮಾಡಿದರೂ ಆಶ್ಚರ್ಯಪಡಬೇಕಾಗಿಲ್ಲ. ಬಿಜೆಪಿಯವರು ಗಾಂಧಿಜಿಯಿಂದ ಸ್ವತಂತ್ರ ಸಿಗಲಿಲ್ಲ ಎನ್ನುತ್ತಾರೆ. ಮನರೇಗಾ ಯೋಜನೆಯಿಂದ ಗಾಂಧಿಜಿ ಹೆಸರು ತೆಗೆದಿದ್ದಾರೆ. ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಎನ್ನುತ್ತಾರೆ. ನಾವು ಗಾಂಧೀಜಿ ಬಗ್ಗೆ ತಿಳಿದುಕೊಳ್ಳಬೇಕು. ಗಟ್ಟಿಯಾಗಿ ನಿಲ್ಲದಿದ್ದರೆ ಇತಿಹಾಸದಲ್ಲಿ ಅಳಿಸುವ ಪ್ರಯತ್ನ ಮಾಡಬಹುದು. ನಮಗೆ ಗಾಂಧಿಜಿ, ಅಂಬೇಡ್ಕರ್, ಬಸವಣ್ಣನವರು ಪ್ರಸ್ತುತ ದಿನಗಳಲ್ಲಿ ಎಷ್ಟು ಅವಶ್ಯಕ ಎನ್ನುವ ಕುರಿತಂತೆ ತಿಳಿದುಕೊಳ್ಳಬೇಕು. ಅವರ ಹೆಸರು ಇತಿಹಾಸದಿಂದ ಅಳಸಿಹಾಕದಂತೆ ನೋಡಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ನಾವು ಹೋರಾಟ ಮಾಡಬೇಕು. ವಿಮಾನ ನಿಲ್ದಾಣಗಳ ಹೆಸರಿಗೆ ಬೇರೆ ಬೇರೆ ಹೆಸರಿಡುವ ಮೂಲಕ ಈ ರೀತಿಯ ಬದಲಾವಣೆಗೆ ಬಿಜೆಪಿ ಮುನ್ಸೂಚನೆ ಬರೆದಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

sambrama prabha editor suresh kt

LEAVE A REPLY

Please enter your comment!
Please enter your name here