Updated By: Priyalachhi
ದಾವಣಗೆರೆ: “ನಾನು ಹಾಗೂ ಶಾಮನೂರು ಶಿವಶಂಕರಪ್ಪನವರು 1995ರಿಂದಲೂ ಪರಿಚಯ. ಅವರು 95ನೇ ವಸಂತಕ್ಕೆ ಕಾಲಿಟ್ಟ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. 100 ವರ್ಷ ಪೂರೈಸುತ್ತಾರೆ ಎಂದುಕೊಂಡಿದ್ದೆವು. ಆದರೆ ನಮ್ಮನ್ನಗಲಿದ್ದು ಬಹಳ ನಷ್ಟವಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಕಲ್ಲೇಶ್ವರ ಮಿಲ್ ಬಳಿ ನಡೆದ ನುಡಿನಮನ ಹಾಗೂ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಶಿವಶಂಕರಪ್ಪನವರು ವ್ಯಾಪಾರ ಉದ್ದಿಮೆಯ ಕುರಿತು ನಿರಂತರವಾಗಿ ಯೋಚನೆ ಮಾಡುತ್ತಿದ್ದರು. ಪಕ್ಷದಲ್ಲಿ ಸುದೀರ್ಘ ಕಾಲ ಖಜಾಂಚಿ ಆಗಿದ್ದರು. ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಎಲ್ಲ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಕಡ್ಡಾಯ ಮಾಡಿದ್ದಕ್ಕಾಗಿ ಶಾಮನೂರು ಅವರು ನನಗೆ ಒಂದು ಕಾರ್ಯಕ್ರಮಕ್ಕೆ ಕರೆದು ಸನ್ಮಾನಿಸಿದ್ದರು. ಅವರೊಬ್ಬ ಜಾತ್ಯತೀತ ನಾಯಕ ಎಂದು ಹೇಳುತ್ತೇನೆ. ಅವರು ಗೆದ್ದಿದ್ದು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ, ಅಲ್ಲಿ ಲಿಂಗಾಯತರು ಕಡಿಮೆ. ಆದ್ರೂ ಜನಪ್ರಿಯತೆಯಿಂದ ಜಯಿಸಿದ್ದರು” ಎಂದು ತಿಳಿಸಿದರು.
“ನಾನು ಅವರನ್ನು ಯಾವಾಗಲೂ ಯಜಮಾನ್ರೇ ಎಂದು ಕರೆಯುತ್ತಿದ್ದೆ. ಮತ್ತೊಂದು ಚುನಾವಣೆಗೆ ನಿಲ್ತೀರಾ ಎಂದು ಕೇಳಿದ್ದೆ? ಹೌದು, ನಿಲ್ತೀನಿ ಎಂದಿದ್ದರು. ಅಷ್ಟು ಉತ್ಸಾಹ ಅವರಿಗಿತ್ತು. ಬಡವರು ವಯಸ್ಸಾದವರ ದಾನಿ. ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡಿದ್ದಾರೆ. ಹುಟ್ಟು ಆಕಸ್ಮಿಕ, ಸಾವು ಗ್ಯಾರಂಟಿ. ಇದರ ಮಧ್ಯೆ ನಾವು ಏನು ಮಾಡಿದೆವು ಎಂಬುದು ಮುಖ್ಯ. ದಾವಣಗೆರೆ ಜವಳಿ ನಗರವಾಗಿತ್ತು. ಅದು ಅವನತಿಯಾದ ಮೇಲೆ ವಿದ್ಯಾಕಾಶಿ ಆಯಿತು. ಅದಕ್ಕೆ ಶಾಮನೂರು ಶಿವಶಂಕರಪ್ಪನವರೇ ಕಾರಣ. 62 ವಿದ್ಯಾಸಂಸ್ಥೆಗಳನ್ನು ಕಟ್ಟಿರುವುದು ಆಶ್ಚರ್ಯಕರ ವಿಚಾರ. ಅವರೊಬ್ಬ ಮನುಷ್ಯಪ್ರೇಮಿ, ಅಜಾತಶತ್ರು” ಎಂದು ಕೊಂಡಾಡಿದರು.



